ಪುಸ್ತಕ -
ಪ್ರಭಾವಿ ಸಂವಹನ ಮಾಧ್ಯಮ. ಇದರ ಭೌತಿಕ ಲಕ್ಷಣ ಎಂದರೆ ಅನೇಕ ಹಾಳೆಗಳನ್ನು ಕೂಡಿಸಿ, ನಾಲ್ಕು ಮಗ್ಗುಲುಗಳಲ್ಲಿ ಯಾವುದೇ ಒಂದು ಮಗ್ಗುಲನ್ನು ಬದ್ಧಗೊಳಿಸಿ ಮುಂದೆ ಹಾಗೂ ಹಿಂದೆ ರಕ್ಷಾ ಹೊದಿಕೆಗಳನ್ನು ಹಾಕಿದ ವಸ್ತು ವಿಶೇಷ (ಬುಕ್). ಈ ಸಾಮಾನ್ಯ ಅರ್ಥದಲ್ಲಿ ಕಾದಂಬರಿ, ಧರ್ಮಗ್ರಂಥ ಇತ್ಯಾದಿಗಳೇ ಅಲ್ಲದೆ; ಚೆಕ್ ಪುಸ್ತಕ, ಟಿಪ್ಪಣೆ ಪುಸ್ತಕ, ದಫ್ತರು ಮೊದಲಾದವುಗಳನ್ನು ಪುಸ್ತಕವೆನ್ನಬಹುದು. ರಕ್ಷಾಪುಟಗಳನ್ನು ಬಿಟ್ಟು ಕನಿಷ್ಠ 40 ಪುಟಗಳ ನಿಯತಕಾಲಿಕವಲ್ಲದ ಮುದ್ರಿತ ಪ್ರಕಟಣೆ ಪುಸ್ತಕ ಎಂಬುದು ಯುನೆಸ್ಕೋ ನೀಡಿರುವ ಲಕ್ಷಣ ನಿರೂಪಣೆ. ಆದರೂ ಈ ವಿಷಯದಲ್ಲಿ ತೃಪ್ತಿಕರವಾದ ಯಾವುದೇ ಲಕ್ಷಣ ನಿರೂಪಣೆ ಇಲ್ಲ. ಪುಸ್ತಕದ ಇತಿಹಾಸದುದ್ದಕ್ಕೂ ಅದರ ರೂಪ, ವಸ್ತು, ಪರಿಕರ ಸಾಮಗ್ರಿಗಳು, ವೈವಿಧ್ಯಮಯವೂ, ವಿಭಿನ್ನವೂ ಆಗಿದ್ದರೂ ಕೆಲವು ಸ್ಥಿರ ಲಕ್ಷಣಗಳನ್ನು ಗುರುತಿಸಬಹುದು. ಕ್ರಿಯಾತ್ಮಕ ಲಕ್ಷಣಗಳಲ್ಲಿ ಅತ್ಯಂತ ಸ್ಪಷ್ಟವಾಗಿರುವ ಲಕ್ಷಣವೆಂದರೆ ಸಂವಹನ ವಾಹಕವಾಗಿ ಪುಸ್ತಕದ ಕ್ರಿಯೆ. ಬೆಬಿಲೋನಿಯದ ಜೇಡಿಫಲಕ, ಈಜಿಪ್ಟಿನ ಪ್ಯಾಪಿರಸ್ ಸುರಳಿ, ಮಧ್ಯಯುಗದ ಚರ್ಮಪತ್ರ, ಮುದ್ರಣ ಕಾಗದ. ಮೈಕ್ರೊಫಿಲ್ಮ್ ಮತ್ತಿತರ ಯಾವುದೇ ರೂಪದಲ್ಲಿರಲಿ ಪುಸ್ತಕ ಸಂವಹನ ಮಾಧ್ಯಮವೇ. ಪುಸ್ತಕದ ಎರಡನೆಯ ಲಕ್ಷಣವೆಂದರೆ ಅರ್ಥವನ್ನು ಸಂವಹನಿಸಲು ಲಿಪಿ ಅಥವಾ ಚಿತ್ರ ಇತ್ಯಾದಿ ದೃಶ್ಯ ಸಂಕೇತಗಳನ್ನು ಬಳಸಿಕೊಳ್ಳುವಿಕೆ. ಪುಸ್ತಕದ ಮೂರನೆಯ ವಿಶಿಷ್ಠ ಲಕ್ಷಣವೆಂದರೆ ಸುಲಭ ಚಲಾವಣೆಗೆ ಅನುಕೂಲವಾಗುವಂತೆ ರೂಪ ಪಡೆಯುವುದು. ಸಂದೇಶವನ್ನು ಹೊತ್ತು ನಿಂತ ದೇಗುಲದ ಒಂದು ಸ್ತಂಭ ಪುಸ್ತಕದಂತೆಯೇ ಸಂವಹನ ಕ್ರಿಯೆಯನ್ನು ನಿರ್ವಹಿಸಬಹುದಾದರೂ ಚಲಾವಣೆಗೆ ಅಸಾಧ್ಯವಾದುದರಿಂದ ಅದು ಪುಸ್ತಕವಾಗಲಾರದು. ಆದ್ದರಿಂದ ಪುಸ್ತಕ ಎಂದರೆ ಸಾಕಷ್ಟು ನೀಳವಾಗಿರುವ ಲಿಖಿತ ಅಥವಾ ಮುದ್ರಿತ ರೂಪದಲ್ಲಿರಬೇಕು. ಸಾರ್ವಜನಿಕ ಪ್ರಸರಣವೇ ಉದ್ದೇಶವಾಗಿರಬೇಕು; ಹಗುರವಾಗಿದ್ದು ಬಾಳಿಕೆ ಬರುವ ಸಾಮಗ್ರಿಯ ಮೇಲೆ ದಾಖಲಾಗಿರಬೇಕು; ಸುಲಭ ಸಾಗಾಣೆಗೆ ಅನುಕೂಲವಾಗಿರಬೇಕು; ಜನರ ನಡುವೆ ಸಂದೇಶ ಪ್ರಸಾರಕ್ಕೆ ಸುಲಭ ಚಲಾವಣೆಗೆ ಶಾಶ್ವತತೆಗೆ ಅನುಕೂಲ ಮಾಧ್ಯಮ ಈ ಪುಸ್ತಕ. ಜ್ಞಾನವನ್ನು ತಿಳಿಯಪಡಿಸಲು ವ್ಯಾಖ್ಯಾನಿಸಲು, ಸಂರಕ್ಷಿಸಲು ಹಾಗೂ ಸಂವಹಿಸಲು ಪುಸ್ತಕ ಕಾಲ ಹಾಗೂ ದೇಶದ ಕಟ್ಟುಪಾಡನ್ನು ಮೀರಿ ನಿಲ್ಲುತ್ತದೆ. ಈ ಹಿನ್ನೆಲೆಯಲ್ಲಿ ನೋಡಿದರೆ ಇದು ಬಹುಸಂಖ್ಯೆಯ ಜನರಿಗೆ ಒಂದೇ ಕಾಲದಲ್ಲಿ ನಿರ್ದಿಷ್ಟ ವಿಚಾರ ಸಾರುವ ಸಾಮೂಹಿಕ ಮಾಧ್ಯಮಗಳಿಂದ ಭಿನ್ನವಾಗುತ್ತದೆ. ಪ್ರತಿಯೊಂದು ಅಕ್ಷರಸ್ಥ ಸಮಾಜದಲ್ಲಿಯೂ ಜ್ಞಾನ ಸಂರಕ್ಷಣೆ ಹಾಗೂ ಪ್ರಸರಣೆಯಲ್ಲಿ ಪುಸ್ತಕದ ಪಾತ್ರ ಮಹತ್ವದ್ದು. 

	ಲಿಪಿಯ ಉಗಮವಾದ ಮೇಲೆ ಪುಸ್ತಕ ರಚನೆ ಯಾವಾಗ ಆರಂಭವಾಯಿತೆಂದು ಹೇಳುವುದು ಕಷ್ಟ. ಏಕೆಂದರೆ ಹಿಂದೆ ಪುಸ್ತಕಗಳನ್ನು ರಚಿಸಲು ಬಳಸಿದ ಸಾಮಗ್ರಿಗಳು ಇಂದೂ ಉಳಿದು ಬಂದಿರುವ ಸಾಧ್ಯತೆ ಕಡಿಮೆ. ಬರಹದ ಅತ್ಯಂತ ಪ್ರಾಚೀನ ನಿದರ್ಶನಗಳೆಂದರೆ ಶಿಲಾ ಲೇಖನಗಳು, ಅತ್ಯಂತ ಪ್ರಾಚೀನ ಪುಸ್ತಕಗಳೆಂದರೆ ಮೆಸಪೋಟೋಮಿಯದ ಜೇಡಿಫಲಕಗಳು. ಈಜಿಪ್ಟಿನ ಪ್ಯಾಪಿರಸ್ ಸುರುಳಿಗಳು. ಇವುಗಳ ಕಾಲ ಕ್ರಿ. ಪೂ. ಸು. 3,000.

	ಜೇಡಿಫಲಕ : ಪ್ರಾಚೀನ ಸುಮೇರಿಯನ್ನರು, ಬ್ಯಾಬಿಲೋನಿಯನ್ನರು, ಆಸಿರಿಯನ್ನರು, ಹಿಟೈಟ್ ಜನ ನೀರಿನಲ್ಲಿ ನೆನೆಸಿದ ಜೇಡಿ ಫಲಕಗಳ ಮೇಲೆ ಬರೆಯುತ್ತಿದ್ದರು. ಇವುಗಳ ಆಕಾರ ಅಳತೆ ಭಿನ್ನಭಿನ್ನವಾಗಿದ್ದರೂ ಸಾಮಾನ್ಯವಾಗಿ ಬಳಕೆಯಲ್ಲಿದ್ದುದು ಐದು ಅಂಗುಲ ಉದ್ದದ ಚತುರ್ಮುಖ ಘನಾಕಾರದ ಫಲಕಗಳು. ಜೇಡಿ ಇನ್ನೂ ಹಸಿ ಇರುವಾಗಲೇ ಲಿಪಿಕಾರ ಒಕ್ಕಣಿಕೆ ಕಂಠದಿಂದ ಕ್ಯೂನಿಫಾರಂ (ಬೆಣೆ) ಅಕ್ಷರಗಳನ್ನು ಕೆತ್ತುತ್ತಿದ್ದ. ಸಣ್ಣಸಣ್ಣ ಅಕ್ಷರಗಳಲ್ಲಿ ಇಡೀ ಪಠ್ಯವನ್ನು ಒಂದೇ ಫಲಕದಲ್ಲಿ ಬರೆಯಲು ಯತ್ನಿಸುತ್ತಿದ್ದ. ದೀರ್ಘ ಪಠ್ಯಗಳಿಗೆ ಅನೇಕ ಫಲಕಗಳನ್ನು ಬರೆದು ಅವಕ್ಕೆ ಕ್ರಮಾಗತ ಸಂಖ್ಯೆಗಳನ್ನಾಗಲಿ, ಸಂಕೇತಗಳನ್ನಾಗಲಿ ಹಾಕುತ್ತಿದ್ದ. ಬಿಸಿಲಿನಲ್ಲಿ ಒಣಗಿದ ಅಥವಾ ಕುಲುಮೆಯಲ್ಲಿ ಕಾಸಿದ ಫಲಕಗಳು ಸ್ಥಿರವಾಗಿ ಉಳಿಯುತ್ತಿದ್ದವು. 19 ನೆಯ ಶತಮಾನದಲ್ಲಿ ನಡೆದ ಉತ್ಖನನಗಳಲ್ಲಿ ಮರೆತುಹೋದ ನಗರಗಳ ಮಣ್ಣು ದಿಬ್ಬಗಳಲ್ಲಿ, ಸಾವಿರಾರು ವರ್ಷಗಳಿಂದ ಹುದುಗಿದ್ದ ಫಲಕಗಳು ಯಥಾವತ್ ದೊರೆತಿವೆ. ಒಂದು ಅಂದಾಜಿನ ಪ್ರಕಾರ 7,50,000 ಫಲಕಗಳು ದೊರೆತಿವೆ. ಉತ್ಖನನ ನಡೆದಂತೆಲ್ಲ ವರ್ಷ ವರ್ಷ ಇವುಗಳ ಸಂಖ್ಯೆ ಹೆಚ್ಚುತ್ತಿದೆ. ಇವು ಆಗಿನ ಕಾಲದ ಪುಸ್ತಕ ನಿರ್ಮಾಣಕ್ಕೆ ಸಾಕ್ಷಿ. ಕ್ರಿ. ಪೂ. 7 ನೆಯ ಶತಮಾನದಲ್ಲಿ ಆಳುತ್ತಿದ್ದ ಆಸೀರಿಯನ್ ದೊರೆ ಅಶುರ್ಯನಿಪಾಲನ ಅರಮನೆಯ ಅವಶೇಷಗಳಲ್ಲಿ ರಾಜ್ಯಗ್ರಂಥ ಭಂಡಾರವೇ ದೊರೆತಿದೆ. ವಿಶೇಷ ಮೌಲ್ಯದ ಪಠ್ಯಗಳು, ನ್ಯಾಯಸೂತ್ರಗಳು, ರಾಜ್ಯವರದಿ, ಮಹಾಕಾವ್ಯಗಳು ಮೊದಲಾದವನ್ನು ಲಿಖಿಸಿದ ಫಲಕ ಪುಸ್ತಕಗಳು ಇದರಲ್ಲಿ ಅಡಗಿವೆ. 

	ಪ್ಯಾಪಿರಸ್ ಸುರುಳಿ : ಪ್ರಾಚೀನ ಈಜಿಪ್ಟಿನ ಪ್ಯಾಪಿರಸ್ ಸುರುಳಿಯನ್ನು ಹೆಚ್ಚು ಕಡಿಮೆ ಆಧುನಿಕ ಪುಸ್ತಕದ ಪ್ರಾಚೀನರೂಪ ಎಂದೇ ಹೇಳಬಹುದು. ಬರಹ ಸಾಮಗ್ರಿಯಾದ ಪ್ಯಾಪಿರಸ್ ಹೆಚ್ಚು ಕಡಿಮೆ ಕಾಗದವನ್ನು ಹೋಲುತ್ತದೆ. ನೈಲ್ ಕಣಿವೆಯಲ್ಲಿ ಬೆಳೆಯುತ್ತಿದ್ದ ಜೊಂಡು ಸಸ್ಯದಿಂದ ಪ್ಯಾಪಿರಸನ್ನು ತಯಾರಿಸಲಾಗುತ್ತಿತ್ತು. ಪ್ಯಾಪಿರಸಿನಿಂದ ತಯಾರಿಸಿದ ಹಾಳೆಗಳು ಸಾಮಾನ್ಯವಾಗಿ ಐದು ಅಥವಾ ಆರು ಅಂಗುಲ ಅಗಲವಿದ್ದು, ಅಗತ್ಯಕ್ಕೆ ಬೇಕಾದವು ಉದ್ದದ ಸುರುಳಿಯಾಗುತ್ತಿದ್ದವು. ಲಿಪಿಕಾರ ಈ ಹಾಳೆಯ ಒಂದು ಮಗ್ಗುಲಲ್ಲಿ ಪಠ್ಯವನ್ನು ಬರೆದು ಹಾಳೆಯ ಎರಡು ತುದಿಗಳಿಗೆ ಮರದ ಉರುಳಿಗಳನ್ನು ಭದ್ರಗೊಳಿಸಿ, ಪಠ್ಯ ಒಳಗಾಗಿರುವಂತೆ ಸುರುಳಿಯಾಗಿಸುತ್ತಿದ್ದ.

	ಜೇಡಿಫಲಕಗಳಿಗೆ ಹೋಲಿಸಿದರೆ ಪ್ಯಾಪಿರಸಿನ ರಚನೆ ನಾಜೂಕಿನದು. ಬೇಗ ನಾಶವಾಗುವ ಗುಣವುಳ್ಳದ್ದು. ಆದರೂ ಕ್ರಿ.ಪೂ. 2500 ರ ಸುರುಳಿಯೊಂದು ಉಪಲಬ್ಧವಿದೆ. ಈಜಿಪ್ಟಿನ ಒಣ ವಾತಾವರಣ ಮರುಭೂಮಿಯ ಮರಳು ನೆಲದಲ್ಲಿ ಇವು ಹುದುಗಿಕೊಂಡಿದ್ದುದು, ಈಜಿಪ್ಟ್ ಜನರ ಶವ ಸಮಾಧಿ ಕ್ರಿಯೆಯ ಧಾರ್ಮಿಕ ವಿಧಿ ವ್ಯವಸ್ಥೆ ಈ ಪ್ಯಾಪಿರಸ್ ಸುರುಳಿಗಳು ದೀರ್ಘಕಾಲದಿಂದ ಉಳಿದು ಬರಲು ಪ್ರಮುಖ ಕಾರಣ.

	ಚೀನೀ ಪುಸ್ತಕ : ಚೀನೀಯರು ಸ್ವತಂತ್ರವಾಗಿ ಪುಸ್ತಕಗಳ ಮುಖಾಂತರ ವಿದ್ವತ್ ಜಗತ್ತನ್ನೆ ಸೃಷ್ಟಿಸಿದರು. ಚೀನಿ ಪುಸ್ತಕಗಳೆಂದರೆ ಬೊಂಬು ಅಥವಾ ಮರದ ತೆಳು ಪಟ್ಟಿಗಳನ್ನು ದಾರದಿಂದ ಬದ್ಧಗೊಳಿಸಿದಂಥವು. ಕ್ರಿ. ಪೂ. 213 ರಲ್ಲಿ ಪುಸ್ತಕ ಉಂಟುಮಾಡುತ್ತಿರುವ ಜಾಗೃತಿ ಹಾಗೂ ಕ್ರಾಂತಿಯನ್ನು ಕಂಡು ಚೀನಿ ಚಕ್ರವರ್ತಿ ಚಿನ್ ಶಿ ಹ್ಯಾಂಗ್ ಟಿ ಪ್ರಕಟಣೆಯನ್ನು ನಿರ್ನಾಮ ಮಾಡಲೆಣಿಸಿ ಪುಸ್ತಕಗಳನ್ನು ರಾಶಿ ರಾಶಿ ಸುಟ್ಟ. ಆದರೂ ಪುಸ್ತಕ ವಿದ್ವತ್ತು ಉಳಿದುಕೊಂಡು ಹಾನ್ ಸಾಮ್ರಾಟರ ಕಾಲದಲ್ಲಿ (ಕ್ರಿ. ಪೂ. 206 ರಿಂದ ಕ್ರಿ. ಶ. 220) ಪೋಷಣೆಗೊಂಡಿತು. ಸತತವಾಗಿ ಪ್ರತಿ ಮಾಡಿಕೊಳ್ಳುವ ಹವ್ಯಾಸದಿಂದ ಚೀನಿ ಪಠ್ಯಗಳು ಉಳಿದುಕೊಂಡು ಬಂದವು. ಕ್ರಿ. óಶ. 175 ರಲ್ಲಿ ಕನ್‍ಫ್ಯೂಷಸ್ಸನ ಕೃತಿಗಳನ್ನು ಶಿಲಾ ಫಲಕಗಳ ಮೇಲೆ ಕೆತ್ತಿ ಅನಂತರ ಅದರಿಂದ ಉಜ್ಜು ಪ್ರತಿಗಳನ್ನು ಬಹುಸಂಖ್ಯೆಯಲ್ಲಿ ಮಾಡಿಕೊಳ್ಳಲಾಗುತ್ತಿತ್ತು. ಮುಂದಣ ಪಡಿಯಚ್ಚು ಮುದ್ರಣ ರೀತಿಗೆ ಇದೇ ನಾಂದಿ. ಕಪ್ಪು ಶಾಯಿಯ ಬಳಕೆ ಕ್ರಿ. ಶ. 400 ರಲ್ಲಿ ಆರಂಭವಾಯಿತು. ಮರದ ಪಡಿಯಚ್ಚುಗಳಿಂದ ಮುದ್ರಣ ಕ್ರಿಯೆ ಆರನೆಯ ಶತಮಾನದಲ್ಲಿ ಕಾಣಿಸಿಕೊಂಡಿತು. 

	ಗ್ರೀಕ್ ಪುಸ್ತಕ : ಕ್ರಿ. ಪೂ. 9 ನೆಯ ಶತಮಾನದಲ್ಲಿಯೇ ಪ್ಯಾಪಿರಸ್ ಸುರುಳಿಗಳ ಬಳಕೆ ಇತ್ತು. ಹೋಮರನ ಕಾಲದಲ್ಲಿಯೇ ಪುಸ್ತಕಗಳು ಇದ್ದುವು ಎಂದು ವಿದ್ವಾಂಸರು ಪ್ರತಿಪಾದಿಸುತ್ತಾರೆ. ಉಪಲಬ್ಧವಿರುವ ಅತ್ಯಂತ ಪ್ರಾಚೀನ ಗ್ರೀಕ್ ಪ್ಯಾಪಿರಸ್ ಸುರುಳಿಗಳೆಂದರೆ ಕ್ರಿ. ಪೂ. 4 ನೆಯ ಶತಮಾನದವು. ಗ್ರೀಕರ ಪುಸ್ತಕಗಳು ಸುಲಭ ವ್ಯವಹಾರ ಸೌಲಭ್ಯದವು. ಈಜಿಪ್ಟಿನ ಪ್ಯಾಪಿರಸ್ ಸುರಳಿಗಳಲ್ಲಿ ಅನೇಕವು 30 ಮಿ. ಗಿಂತಲೂ ಹೆಚ್ಚು ಉದ್ದವಿದ್ದು ಅಲಂಕೃತ ಶೈಲಿಯಲ್ಲಿ ರಚಿತವಾಗಿದ್ದರೆ ಗ್ರೀಕರ ಯಾವುದೇ ಸುರುಳಿ 11 ಮೀ.ಗಿಂತ ಉದ್ದವಿಲ್ಲ. ಅಲೆಗ್ಸಾಂಡರನ ಕಾಲದಲ್ಲಿ ಪುಸ್ತಕ ರಚನೆಗೆ ವ್ಯಾಪಕ ಅವಕಾಶ ದೊರೆಯಿತು. ಅವನ ದಿಗ್ವಿಜಯ ಯಾತ್ರೆಯಿಂದ ಜಗತ್ತಿನ ಹೊಸ ಹೊಸ ವಿಚಾರಗಳು ನುಗ್ಗಿ ಬರತೊಡಗಿ ಪುಸ್ತಕ ನಿರ್ಮಾಣ ತ್ವರಿತಗೊಂಡು ವಿವಿಧ ಕೇಂದ್ರಗಳಲ್ಲಿ ಗ್ರಂಥ ಭಂಡಾರಗಳೂ ಹುಟ್ಟಿಕೊಂಡವು. ಅಲೆಗ್ಸಾಂಡ್ರಿಯಾದ ಗ್ರಂಥ ಭಂಡಾರದಲ್ಲಿ ವಿವಿಧ ಕಾಲಗಳಲ್ಲಿ 2,00,000 ದಿಂದ 7,00,000 ಸುರುಳಿಗಳವರೆಗೆ ಸಂಗ್ರಹವಿತ್ತು ಎಂದು ಹೇಳಲಾಗುತ್ತದೆ.

	ರೋಮನ್ ಪುಸ್ತಕ : ರೋಮನ್ನರು ಗ್ರೀಸನ್ನು ವಶಪಡಿಸಿಕೊಂಡ ಮೇಲೆ ರೋಮ್ ಸಾಮ್ರಾಜ್ಯದಲ್ಲಿಯೂ ಪುಸ್ತಕ ಚಳವಳಿ ಆರಂಭವಾಯಿತು. ಲ್ಯಾಟಿನ್ ಅಕ್ಷರ ಮಾಲೆಯನ್ನು ಬಳಸುವುದನ್ನು ಬಿಟ್ಟರೆ ಸುರುಳಿಗಳು ಗ್ರೀಕ್ ಮಾದರಿಯಂತೆಯೇ ರೋಮನ್ನರು ಪುಸ್ತಕ ವ್ಯಾಪಾರವನ್ನು ದೊಡ್ಡ ಪ್ರಮಾಣದಲ್ಲಿ ಮಾಡಲಾರಂಭಿಸಿದರು. ಜನಸಾಮಾನ್ಯರಿಗೂ ದೊರೆಯುವಂತೆ ಅಗ್ಗದ ಬೆಲೆಯಲ್ಲಿ ಪುಸ್ತಕ ಸರಬರಾಜು ನಡೆಯುತ್ತಿತ್ತು. ಸಿಸಿರೋನ ಕಾಲದಿಂದ ದೊಡ್ಡ ದೊಡ್ಡ ಲಿಪಿಕಾರ ಭಂಡಾರಗಳು ಪುಸ್ತಕಗಳನ್ನು ಬಹುಸಂಖ್ಯೆಯಲ್ಲಿ ಪ್ರತಿಮಾಡಿಸಿ ಮಾರುತ್ತಿದ್ದವು. ಗುಲಾಮ ಲಿಪಿಕಾರರನ್ನು ಕೂರಿಸಿಕೊಂಡು ಪಠ್ಯ ಓದುಗನೊಬ್ಬ ನಿಂತಿಕೊಂಡು ಒಂದೇ ಸಾರಿಗೆ 30 ಪ್ರತಿಗಳನ್ನು ತೆಗೆಯಲಾಗುತ್ತಿತ್ತು. ಸಿಸಿರೋನ ಕೃತಿಗಳಲ್ಲಿ ಪುಸ್ತಕದಂಗಡಿಗಳ ಉಲ್ಲೇಖ ಬರುತ್ತದೆ. ಮೇಲುವರ್ಗದ ರೋಮನ್ನರ ಮನೆಗಳಲ್ಲಿ ಖಾಸಗಿ ಗ್ರಂಥ ಭಂಡಾರ ಸರ್ವೇಸಾಮಾನ್ಯವಾಗಿತ್ತು. ಹೀಗೆ ಗ್ರಂಥ ಭಂಡಾರ ಹೊಂದಿರುವುದು ಅಂದಿನ ದಿನಗಳಲ್ಲಿ ಪ್ರತಿಷ್ಠೆಯ ಕುರುಹಾಗಿತ್ತು. 

	ಬದ್ಧಪತ್ರ : ಸುರುಳಿಯ ಬದಲು ಕ್ರೋಡೀಕೃತ ಬದ್ಧಪತ್ರವನ್ನು ಬಳಸಲಾರಂಭಿಸಿದ್ದು ಪುಸ್ತಕ ಜಗತ್ತಿನಲ್ಲಿ ಕ್ರಾಂತಿಯನ್ನುಂಟುಮಾಡಿತು. ಇದಕ್ಕೆ ಬಳಸುವ ಸಾಮಗ್ರಿ ಚರ್ಮದ ಹಾಳೆಗಳು. ಮಡಿಚಿದ ಹಾಳೆಗಳನ್ನು ಯಾವುದೇ ಒಂದು ಮಗ್ಗುಲಿಗೆ ಹೊಲೆಯಲಾಗುತ್ತಿತ್ತು. ಸುರುಳಿಗಿಂತ ಚರ್ಮಪತ್ರ ಹಸ್ತಪ್ರತಿ ಅನೇಕ ಬಗೆಯಲ್ಲಿ ಅನುಕೂಲಕರ. ಈ ಬದ್ಧಪತ್ರ ಪುಸ್ತಕದಲ್ಲಿ ಪಠ್ಯದ ಯಾವುದೇ ಪುಟವನ್ನು ಸುಲಭವಾಗಿ ತೆರೆಯಬಹುದು. ಹಾಳೆಯ ಎರಡು ಮಗ್ಗುಲಲ್ಲಿಯೂ ಬರಹ ಸಾಧ್ಯ. ದೀರ್ಘಪಠ್ಯಗಳನ್ನು ಒಂದೇ ಸಂಪುಟದಲ್ಲಿ ಬದ್ಧಗೊಳಿಸಬಹುದು. ಪ್ಯಾಪಿರಸ್ ಸುರುಳಿಗಳಲ್ಲಾದರೆ ಒಂದೇ ಮಗ್ಗುಲಿಗೆ ಬರೆದು ಹಲವಾರು ಸುರುಳಿಗಳನ್ನು ಬಿಡಿಬಿಡಿಯಾಗಿ ಇಡಬೇಕಾಗುತ್ತದೆ.

	ಮಧ್ಯಕಾಲೀನ ಚರ್ಮಪತ್ರಗಳನ್ನು ಪ್ರಾಣಿಗಳ ಚರ್ಮದಿಂದ ಹದಗೊಳಿಸಲಾಗುತ್ತಿತ್ತು. ಕ್ರಿ. ಪೂ. 2450 ರಷ್ಟು ಹಿಂದೆಯೇ ಚರ್ಮವನ್ನು ಬರಹ ಸಾಮಗ್ರಿಯಾಗಿ ಬಳಸಿದ್ದಕ್ಕೆ ಉಲ್ಲೇಖಗಳಿವೆ. ಹೀಬ್ರೂಗಳೂ ಇದನ್ನು ಬಳಸುತ್ತಿದ್ದರು. ಸುಮಾರು 400 ವರ್ಷಗಳ ಕಾಲ ಸುರುಳಿ ಹಾಗೂ ಬದ್ಧಪತ್ರಗಳೆರಡರ ಬಳಕೆ ಜೊತೆ ಜೊತೆಯಾಗಿಯೇ ಇತ್ತು. ಸುಮಾರು 4 ನೆಯ ಶತಮಾನದ ವೇಳೆಗೆ ಬರಹ ಸಾಮಗ್ರಿಯಾಗಿ ಚರ್ಮಪತ್ರವೂ ಪುಸ್ತಕ ರೂಪವಾಗಿ ಬದ್ಧ ಪತ್ರವೂ ಪ್ರಮುಖವಾದುವು. ಅನಂತರ ವಿರಳವಾಗಿ ಸುರುಳಿಯ ಬಳಕೆಯಿತ್ತು. ಆದರೆ 10ನೆಯ ಶತಮಾನದವರೆಗೆ ರಾಜದಾಖಲೆಗಳಾಗಿ ಪ್ಯಾಪಿರಿಸನ್ನು ಬಳಸುತ್ತಲೇ ಇರಲಿಲ್ಲ. 

	5ನೆಯ ಶತಮಾನದ ವೇಳೆಗೆ ರೋಮ್ ಸಾಮ್ರಾಜ್ಯ ಪತನಗೊಂಡು ವಿದೇಶೀಯರ ದಾಳಿ ಅವ್ಯಾಹತವಾದಾಗ ಪುಸ್ತಕದ ಅಸ್ತಿತ್ವಕ್ಕೆ ಧಕ್ಕೆ ಒದಗಿತು. ಆಗ ಧಾರ್ಮಿಕ ಸಂಸ್ಥೆಗಳು ಪುಸ್ತಕ ಸಂಪ್ರದಾಯ ಉಳಿಯಲು ನೆರವಾದುವು. ಮುಂದಿನ ಆರು ಶತಮಾನಗಳ ಕಾಲ ಯೂರೋಪಿನಲ್ಲಿ ಸಂಸ್ಥೆಗಳನ್ನು ಬಿಟ್ಟರೆ ಹೊರಗೆ ಪುಸ್ತಕ ನಿರ್ಮಾಣವಾಗುತ್ತಿರಲಿಲ್ಲ. 12 ನೆಯ ಶತಮಾನದಲ್ಲಿ ವಿಶ್ವವಿದ್ಯಾಲಯಗಳು ಪುಸ್ತಕ ವಿನ್ಯಾಸ, ಬೆಲೆ, ಮಾರುಕಟ್ಟೆ ವ್ಯವಸ್ಥೆ ಇತ್ಯಾದಿ ವಿಷಯಗಳಲ್ಲಿ ನಿಯಮ ನಿಬಂಧನೆಗಳನ್ನು ರೂಪಿಸಿದ್ದುವು.

	15ನೆಯ ಶತಮಾನದಲ್ಲಿ ಸಾಮಾಜಿಕ ಪರಿವರ್ತನೆಗಳಾಗುತ್ತಿದ್ದಂತೆ ಮಾನವೀಯ ಧ್ವನೀಯ ಚಳವಳಿಗಳು ಒಡಮೂಡುತ್ತಿದ್ದಂತೆಯೇ ದೇಶೀಯ ಭಾಷೆಗಳಲ್ಲಿ ಕೃತಿ ರಚನೆ ಮಾಡುವ ಆಸಕ್ತಿ ಸರ್ವವ್ಯಾಪಕವಾಗಿ ಪುಸ್ತಕ ರಚನೆ ಹಾಗೂ ಪ್ರಕಟಣೆ ತೀವ್ರವಾಯಿತು. ಅಧಿಕ ಪ್ರತಿಗಳನ್ನು ಶೀಘ್ರಕಾಲದಲ್ಲಿ ಮುದ್ರಿಸುವ ಅಗತ್ಯ ತಲೆದೋರಿ ಮುದ್ರಣದ ಅರುಣೋದಯವಾಯಿತು. ಕಾಗದದ ಬಳಕೆ ಆರಂಭವಾಯಿತು.

	1439ರಲ್ಲಿ ಮುದ್ರಣವನ್ನು ಕಂಡು ಹಿಡಿದ ಖ್ಯಾತಿ ಜರ್ಮನ್ ಮುದ್ರಕ ಯೋಹಾನ್ ಗುಟೆನ್‍ಬರ್ಗ್‍ನಿಗೆ ಸಲ್ಲುತ್ತದೆ. 1457ರಲ್ಲಿ ಮುದ್ರಿತವಾದ ಕೃತಿಯೇ ದೊರೆತಿರುವ ಯೂರೋಪಿನ ಪ್ರಥಮ ಮುದ್ರಿತ ಪುಸ್ತಕ. ಮುದ್ರಣ ಎಷ್ಟು ತೀವ್ರವಾಗಿ ಹರಡಿಕೊಂಡಿತೆಂದರೆ 1500ರ ಹೊತ್ತಿಗೆ ರಷ್ಯವನ್ನುಳಿದು ಯೂರೋಪಿನ ಎಲ್ಲ ರಾಷ್ಟ್ರಗಳಲ್ಲಿಯೂ ಮುದ್ರಣಾಲಯಗಳು ಕಾರ್ಯ ಪ್ರವೃತ್ತವಾದವು. ಅಂದರೆ ಕೇವಲ 50 ವರ್ಷಗಳ ಅವಧಿಯಲ್ಲಿ ಪ್ರಕಟವಾದ ಪುಸ್ತಕಗಳ ಸಂಖ್ಯೆ ಹಿಂದಿನ ಹಲವಾರು ಶತಮಾನಗಳ ಕಾಲದಲ್ಲಿ ಹೊರಬಂದ ಸಂಖ್ಯೆಯನ್ನು ಮೀರಿತ್ತು.

	ಮುದ್ರಣ ಮೂಲ ಯೂರೋಪಿನಲ್ಲಿಯೇ ಹುಟ್ಟಿಕೊಂಡಿದ್ದಲ್ಲ. ಅದರ ಬೇರುಗಳು ಇನ್ನೂ ಪ್ರಾಚೀನ. ಬ್ಯಾಬಿಲೋನಿಯನ್ನರು ಹಸಿ ಜೇಡಿಫಲಕಗಳ ಮೇಲೆ ಮುದ್ರೆಗಳನ್ನು ಒತ್ತುತ್ತಿದ್ದರು. ಚೀನಿಯರು ಮರದ ಪಡಿಯಚ್ಚುಗಳನ್ನು ತಯಾರಿಸಿಕೊಂಡು ಮುದ್ರಿಸುತ್ತಿದ್ದರು. ಇದನ್ನು ಜಪಾನೀಯರು ಅಳವಡಿಸಿಕೊಂಡಿದ್ದರು. ಕ್ರಿ. ಶ. 770ರಲ್ಲಿ ಪ್ರಾರ್ಥನಾ ಮಂತ್ರವೊಂದನ್ನು 10,00,000 ಸಂಖ್ಯೆಯಲ್ಲಿ ಮುದ್ರಿಸಿದ್ದರಂತೆ. ಈ ರೀತಿ ಪಡಿಯಚ್ಚು ಮುಖಾಂತರ ಪ್ರಕಟವಾಗಿದ್ದು ಉಪಲಬ್ಧವಿರುವ ಪ್ರಾಚೀನ ಪುಸ್ತಕ ಎಂದರೆ ಚೀನದಲ್ಲಿ ಕ್ರಿ. ಶ. 868ರಲ್ಲಿ ಪ್ರಕಟವಾದ ವಜ್ರಸೂತ್ರ-ಬುದ್ಧಸೂಕ್ತಗಳ ಕೃತಿ.

	ಜರ್ಮನ್ ಮುದ್ರಕರು ಹೊಸ ಹೊಸ ಆವಿಷ್ಕಾರಗಳನ್ನು ಮಾಡಿದರು. ಸರಿಯಾದ ಅಳತೆಯಲ್ಲಿ ಲೋಹ ಮೊಳೆಯಕ್ಷರಗಳನ್ನು ಎರಕ ಹೊಯ್ಯುವುದು. ಬೇರೆ ಬೇರೆ ಮೊಳೆಯಕ್ಷರಗಳನ್ನು ಮುದ್ರಣಾನುಕೂಲಕ್ಕೆ ತಕ್ಕಂತೆ ಒಟ್ಟಾರೆ ಬದ್ಧಗೊಳಿಸುವುದು. ಲೋಹದ ಅಕ್ಷರಗಳಿಗೆ ಅನುಗುಣವಾದ ತೈಲಮಿಶ್ರಿತ ಶಾಯಿಯನ್ನು ತಯಾರಿಸುವುದು ಇತ್ಯಾದಿ.

	ಮುದ್ರಿತ ಪ್ರಥಮಾವಸ್ಥೆಯ ಪುಸ್ತಕಗಳನ್ನು (ತೊಟ್ಟಿಲ ಕೂಸುಗಳು) ಇನ್‍ಕ್ಯುವ್ಯಾಬುಲ ಎನ್ನುತ್ತಿದ್ದರು. ಇವುಗಳ ವಿನ್ಯಾಸ, ಅಕ್ಷರ ಮೊದಲಾದವು ಹಸ್ತ ಪ್ರತಿಗಳನ್ನೇ ಹೋಲುತ್ತಿದ್ದವು. ಈ ಅವಧಿಯ ನಂತರ ಹಸ್ತಾಕ್ಷರಗಳನ್ನು ಹೋಲುವ ಅಚ್ಚು ಮೊಳೆಗಳ ಬದಲು ಮುದ್ರಣ ಅಕ್ಷರಗಳೇ ವಿಶಿಷ್ಟವಾಗಿ ರೂಪುಗೊಂಡವು. 16ನೆಯ ಶತಮಾನದ ವೇಳೆಗೆ ಕಪ್ಪು ಅಕ್ಷರ, ರೋಮನ್ ಅಕ್ಷರ ಹಾಗೂ ಇಟಾಲಿಕ್ ಅಕ್ಷರ ಎಂಬ ಮೂರು ಪ್ರಮುಖ ಮುದ್ರಣಾಕ್ಷರಗಳು ಬಳಕೆಗೆ ಬಂದುವು.

	ಪುಸ್ತಕ ಇತಿಹಾಸದ ಮಹತ್ವದ ಘಟನೆಯಾದ ಮುದ್ರಣ ಯಂತ್ರದ ಉಪಜ್ಞೆ ಆದ ಬಳಿಕ ಪ್ರಯೋಗಶೀಲ ಅವಧಿ ಮುಗಿದು ಕ್ರಮಬದ್ಧ ವ್ಯವಸ್ಥೆ ರೂಪುಗೊಂಡಿತು. ಆರಂಭ ಕಾಲದಲ್ಲಿ ಮುದ್ರಣ ಯಂತ್ರ ತಯಾರಕ, ಮುದ್ರಣ ಅಕ್ಷರ ರೂಪಕ, ಮುದ್ರಣ ಸಂಪಾದಕ, ಪ್ರಕಾಶಕ ಹಾಗೂ ಮಾರಾಟಗಾರ ಎಲ್ಲ ಒಬ್ಬನೇ ಆಗಿರುತ್ತಿದ್ದ. ಕ್ರಮಕ್ರಮೇಣ ಸುಧಾರಣಾ ಯುಗದ ಅವಧಿಯಲ್ಲಿ ಪ್ರತಿಯೊಂದೂ ವಿಶಿಷ್ಟ ಉದ್ಯಮವಾಗಿ ರೂಪುಗೊಂಡವು.

	ಮೊದಲು ಹಸ್ತಪ್ರತಿಗಳಲ್ಲಿ ಜನಪ್ರಿಯವಾಗಿದ್ದ ಕೃತಿಗಳು ಮುದ್ರಣ ಕಾಣುತ್ತಿದ್ದವು. ಕ್ರಮೇಣ ಹೊಸ ಬರಹಗಾರರ ಹೊಸ ಬಗೆಯ ಕೃತಿಗಳೂ ಬೆಳಕು ಕಂಡವು. ಅಧಿಕ ಸಂಖ್ಯೆಯಲ್ಲಿ ಪುಸ್ತಕಗಳನ್ನು ಪ್ರಕಟಿಸಿ ಕಡಿಮೆ ಬೆಲೆಯಲ್ಲಿ ಸಾಮಾನ್ಯ ಓದುಗನಿಗೆ ದೊರೆಯುವಂತೆ ಮಾಡಲಾಯಿತು. ಪುಸ್ತಕದ ರಕ್ಷಾಪತ್ರವಾಗಿ ಮರದ ಹಲಗೆಗಳನ್ನು ಬಳಸುತ್ತಿದ್ದುದಕ್ಕೆ ಬದಲಾಗಿ ಗಟ್ಟಿ ರಟ್ಟನ್ನು ಉಪಯೋಗಿಸಲಾರಂಭಿಸಿದರು.

	ಮುದ್ರಿತ ಪುಸ್ತಕ ಉಗಮದಿಂದ ಚಿಂತನ ಹಾಗೂ ವಿದ್ವತ್ ವಲಯಗಳಲ್ಲಿ ಕ್ರಾಂತಿ ಸಾಧ್ಯವಾಯಿತು. ಇದಕ್ಕೆ 16ನೆಯ ಶತಮಾನದ ಸುಧಾರಣಾ ಯುಗವೇ ಸಾಕ್ಷಿ. ಸಾಂಸ್ಕøತಿಕ ಪರಿವರ್ತನೆ ತಲೆದೋರತೊಡಗಿತು. ಪ್ರಾಚೀನ ವಾಕ್ ಸಂಪ್ರದಾಯಗಳು ಹಿಂದಕ್ಕೆ ಸರಿದುವು. 17 ಮತ್ತು 18ನೆಯ ಶತಮಾನದಲ್ಲಿ ವಾಚಕರ ಸಂಖ್ಯೆ ಅಧಿಕಗೊಂಡಿತು. ಇದಕ್ಕೆ ಸ್ತ್ರೀಯರಲ್ಲಿ ಸಾಕ್ಷರತೆ ಹೆಚ್ಚಿದ್ದೂ ಒಂದು ಕಾರಣ. ಚಿತ್ರಗಳನ್ನು ಅಚ್ಚು ಮಾಡುವ ಲಿತೋಗ್ರಾಫ್ ಪ್ರಕ್ರಿಯೆ 18ನೆಯ ಶತಮಾನದ ಕೊನೆಯ ವೇಳೆಗೆ ಕಾಣಿಸಿಕೊಂಡಿತು. ಮುಂದಿನ ಆಫ್‍ಸೆಟ್ ಮುದ್ರಣಕ್ಕೆ ಇದೇ ಬುನಾದಿ.

	ಸುಧಾರಣಾ ಯುಗದಲ್ಲಿ ಪುಸ್ತಕದ ಮೇಲೆ ಸಾಕಷ್ಟು ವಿರೋಧ ಬಂತು. ಒಪ್ಪಿತ ಸಾಮಾಜಿಕ ಕಟ್ಟಳೆಯನ್ನು ಪ್ರತಿಭಟಿಸುವ ಯಾವುದೇ ಪುಸ್ತಕವನ್ನು ಸೆನ್ಸಾರ್ ಮಾಡಲಾಗುತ್ತಿತ್ತು. ಬಹಿಷ್ಕಾರ ಹಾಕಲಾಗುತ್ತಿತ್ತು. ಪುಸ್ತಕ ಉದ್ಯಮಕ್ಕೆ ಸಂಬಂಧಿಸಿದಂತೆ ಅನೇಕ ನೀತಿ ನಿಯಮಾವಳಿಗಳಾದವು. ಕೃತಿಸ್ವಾಮ್ಯ ಹಕ್ಕು ಕುರಿತು ಕಾಯಿದೆಗಳಾದವು. 

	ಔದ್ಯೋಗೀಕರಣ, ಪ್ರಜಾಪ್ರಭುತ್ವ ಮತ್ತು ನಗರೀಕರಣಗಳಿಂದ 19ನೆಯ ಶತಮಾನದಲ್ಲಿ ಪುಸ್ತಕದ ಉತ್ಪಾದನೆ ಉತ್ಕರ್ಷ ಕಂಡಿತು. 1900ರಲ್ಲಿ ಜನಪ್ರಿಯ ಕಾದಂಬರಿಗಳು ಆರು ಲಕ್ಷ ಪ್ರತಿಗಳಿಗೂ ಹೆಚ್ಚು ಮಾರಾಟವಾಗುತ್ತಿದ್ದವು.

	ಔದ್ಯೋಗಿಕ ಕ್ರಾಂತಿಯ ಪ್ರಭಾವ ಪರಿಣಾಮಗಳು ಪುಸ್ತಕ ನಿರ್ಮಾಣದ ಮೇಲೆ ಅಗಾಧವಾಗಿ ಪುಸ್ತಕ ಮುದ್ರಣ ಕಲೆಯನ್ನು ಆಧುನಿಕ ಉತ್ಪಾದನಾ ಉದ್ಯಮವನ್ನಾಗಿಸಿಬಿಟ್ಟವು. 19ನೆಯ ಶತಮಾನದ ಕೊನೆಯ ವೇಳೆಗೆ ಹಳೆಯ ಹಸ್ತ ಪ್ರಕ್ರಿಯೆಗಳು ಮಾಯವಾಗಿ ವಿದ್ಯುತ್ ಚಾಲಿತ ಯಂತ್ರಗಳ ಮೂಲಕ ನಡೆಯುವ ಉತ್ಪಾದನೆಗಳಾದವು. ಚಿಕ್ಕ ಆಕಾರದ ಕಾಗದ ತಯಾರಿಕೆಯ ಬದಲು ವೇಗವಾಗಿ ಚಲಿಸುವ ಯಂತ್ರಗಳ ಮೂಲಕ ದೊಡ್ಡ ದೊಡ್ಡ ಉರುಳೆ ಕಾಗದವನ್ನು ತಯಾರಿಸತೊಡಗಿದರು. ಅಗಲ ಕಾಗದವನ್ನು ಇಟ್ಟು ಏಕಕಾಲದಲ್ಲಿ ಅನೇಕ ಪುಟಗಳನ್ನು ಅಚ್ಚು ಮಾಡಬಲ್ಲ ಮುದ್ರಣ ಯಂತ್ರಗಳು ಬಳಕೆಗೆ ಬಂದವು. ಸಿಲಿಂಡರ್ ಮುದ್ರಣ ಯಂತ್ರಗಳ ಆಗಮನದಿಂದ ತೀವ್ರಗತಿಯ ಮುದ್ರಣ ಸಾಧ್ಯವಾಯಿತು. ಮೊಳೆ ಅಕ್ಷರಗಳನ್ನು ತ್ವರಿತವಾಗಿ ಎರಕ ಹುಯ್ಯುವ ಯಂತ್ರಗಳನ್ನು ಕಂಡು ಹಿಡಿಯಲಾಯಿತು. 1884ರಲ್ಲಿ ಇಡೀ ಸಾಲಿನ ಅಕ್ಷರಗಳನ್ನು ಒಂದೇ ಸಾರಿಗೆ ಎರಕ ಹುಯ್ಯುವ ಲೈನೋಟೈಪ್ ಯಂತ್ರವನ್ನು ತಯಾರಿಸಲಾಯಿತು. ಮುದ್ರಣದ ನವನವೀನ ಆವಿಷ್ಕಾರಗಳಾಗತೊಡಗಿದವು. 1909ರಲ್ಲಿ ಪೋಟೊ ಆಫ್‍ಸೆಟ್ ಮುದ್ರಣದಿಂದ ಮೊಳೆ ಜೋಡಣೆಯ ಕೆಲಸವೇ ಇಲ್ಲದೇ ಪುನರ್ಮುದ್ರಣ ಸಾಧ್ಯವೆನಿಸಿತು. ಹಿಂದಿನ ಮುದ್ರಿತ ಕೃತಿಯ ಪುಟಗಳ ಛಾಯಾಗ್ರಹಣ ಮಾಡಿ ಮುದ್ರಣ ಫಲಕಗಳನ್ನು ಮಾಡಿಕೊಂಡು ಮುದ್ರಿಸತೊಡಗಿದರು. ಮೈಕ್ರೋಫಿಲ್ಮ್ ಗ್ರಂಥಾಲಯಗಳು ಹುಟ್ಟಿಕೊಂಡವು. ಯಾವುದೇ ಪುಟವನ್ನು ಅದರ 200 ನೆಯ ಒಂದು ಭಾಗದಷ್ಟು ಗಾತ್ರದಲ್ಲಿ ಛಾಯಾಗ್ರಹಿಸಿ ಅವುಗಳನ್ನು ಸಂಗ್ರಹಿಸತೊಡಗಿದುದರಿಂದ ಪ್ರಾಚೀನ ಕೃತಿಗಳನ್ನು ಶಾಶ್ವತವಾಗಿ ಹಿಡಿದಿಡಬಹುದಾದ ಸಾಧ್ಯತೆಯ ಜೊತೆಗೆ ದೊಡ್ಡ ಸಂಗ್ರಹವನ್ನು ಕಿರಿದಾದ ಸ್ಥಳದಲ್ಲಿ ಇಡಬಹುದಾಯಿತು.

	20ನೆಯ ಶತಮಾನದಲ್ಲಿ ಇತರ ಬಗೆಯ ಸಮೂಹ ಮಾಧ್ಯಮಗಳು ಜನಪ್ರಿಯವಾಗತೊಡಗಿ, ಪರಂಪರಾಗತವಾಗಿ ಪುಸ್ತಕಕ್ಕೆ ಇದ್ದ ಸ್ಥಾನಕ್ಕೆ ಎಲ್ಲಿ ಚ್ಯುತಿ ಬರುವುದೋ ಎನ್ನಿಸತೊಡಗಿತು. ರೇಡಿಯೋ, ಸಿನಿಮಾ, ದೂರದರ್ಶನಗಳು ಬಹುಸಂಖ್ಯೆಯ ಜನರನ್ನು ನಿರಕ್ಷರಸ್ತರನ್ನು ಏಕಕಾಲದಲ್ಲಿ ಅಪ್ಯಾಯಮಾನವಾಗಿ ಮುಟ್ಟುತ್ತಿದ್ದವು.

ಓದುವ ಹವ್ಯಾಸಕ್ಕೆ ಗಂಭೀರ ಸ್ಪರ್ಧೆ ಹುಟ್ಟಿಕೊಂಡಂತಾಯಿತು. ಆದರೂ ಪುಸ್ತಕದ ಸ್ಥಾನಕ್ಕೆ ಧಕ್ಕೆ ತಟ್ಟುವುದು ಸಾಧ್ಯವಿರಲಿಲ್ಲ. ಪುಸ್ತಕ ಯಾವಾಗಲೂ ಜ್ಞಾನದ ಉಗ್ರಾಣ. ಧ್ವನಿ ಹಾಗೂ ದೃಶ್ಯಗಳು ಸ್ಥಿರವಾದವು. ಮುದ್ರಿತ ಅಕ್ಷರ ಸ್ಥಿರ. ಪುಸ್ತಕವನ್ನು ಯಾವುದೇ ವ್ಯಕ್ತಿ ತನಗೆ ಇಷ್ಟ ಬಂದಷ್ಟು ಕಾಲ ತೆಗೆದುಕೊಂಡು ಓದಬಹುದು. ಮತ್ತೆ ಮತ್ತೆ ನೋಡಬಹುದು. ಓದುವಿಕೆ ವೈಯುಕ್ತಿಕ ಬಿಡಿಕ್ರಿಯೆ. ರೇಡಿಯೋ, ಸಿನಿಮಾ, ದೂರದರ್ಶನಗಳದು ಸಾಮೂಹಿಕ ಕ್ರಿಯೆ.
ಉತ್ತಮ ಪುಸ್ತಕಗಳ ಮಹತ್ವಪೂರ್ಣ ಮೌಲಿಕತೆಯನ್ನು ಗುರುತಿಸುವ ಚಿಂತಕರ ಅಭಿಪ್ರಾಯದ ಪ್ರಕಾರ ಸ್ವಾತಂತ್ರ್ಯಪೂರ್ಣ ಹಾಗೂ ಶ್ರೇಷ್ಠ ಪ್ರಜಾಪ್ರಭುತ್ವದ ಆರೋಗ್ಯಕರ ಬೆಳವಣಿಗೆಗೆ ಆಧುನಿಕ ಜಗತ್ತಿನಲ್ಲಿ ಪುಸ್ತಕದ ಸೌಕರ್ಯ ಹಾಗೂ ಪ್ರತಿಷ್ಠೆಯನ್ನು ಇನ್ನೂ ಉತ್ತಮಗೊಳಿಸಬೇಕು.

	ಪುಸ್ತಕ ಘಟಕಗಳು : ಈಗಿನ ಪುಸ್ತಕ ಎಂದರೆ ಕಾಗದದ ಹಾಳೆಗಳ ಸಮುಚ್ಚಯ. ಹಾಳೆಗಳ ಒಂದು ತುದಿಯಿಂದ ಸೇರಿಸಿ ರಕ್ಷಾಪತ್ರವನ್ನು ಹಾಕಿ ರಟ್ಟು ಕಟ್ಟಲಾಗಿರುತ್ತದೆ. ರಕ್ಷಾಪತ್ರ ಸಾಮಾನ್ಯವಾಗಿ ಕಾಗದ, ಬಟ್ಟೆ ಅಥವಾ ಚರ್ಮದ್ದಾಗಿರುತ್ತದೆ. ಪುಸ್ತಕದ ಹೊಲಿದ ಅಥವಾ ಪಿನ್ನು ಮಾಡಿದ ಭಾಗವನ್ನು ಬೆನ್ನು ಎನ್ನುತ್ತಾರೆ. ಪ್ರತಿ ಹಾಳೆಯ ಎರಡು ಮಗ್ಗಲುಗಳನ್ನು ಪುಟ ಎನ್ನುತ್ತಾರೆ. ಪುಟದಲ್ಲಿ ಅಚ್ಚಾದ ಭಾಗದ ಮೇಲಣ, ಕೆಳಗಣ ಹಾಗೂ ಪಕ್ಕದ ಖಾಲಿ ಭಾಗಗಳನ್ನು ಮಾರ್ಜಿನ್ ಎನ್ನುತ್ತಾರೆ. ಮಾರ್ಜೀನಿನ ಉದ್ದಗಲಗಳು ಪುಸ್ತಕದಿಂದ ಪುಸ್ತಕಕ್ಕೆ ಭಿನ್ನವಾಗಿರಬಹುದು. ಸಾಮಾನ್ಯವಾಗಿ ಪ್ರತಿ ಪುಟದ ಮೇಲ್ಭಾಗದಲ್ಲಿ ಪುಸ್ತಕದ ಶೀರ್ಷಿಕೆ ಅಥವಾ ಅಧ್ಯಾಯ ಶೀರ್ಷಿಕೆ ಅಥವಾ ಆ ಪುಟದಲ್ಲಿ ಅಚ್ಚಾಗಿರುವ ಮೊದಲ ಅಥವಾ ಕೊನೆಯ ಲೇಖನದ ಶೀರ್ಷಿಕೆ ಮತ್ತು ಪುಟಸಂಖ್ಯೆ ಇರುತ್ತದೆ. ಅಧ್ಯಾಯಗಳು ಸಾಮಾನ್ಯವಾಗಿ ಹೊಸ ಪುಟದಲ್ಲಿ ಆರಂಭವಾಗುತ್ತವೆ. 

ಪುಸ್ತಕದ ಆರಂಭ ಪುಟ ಶೀರ್ಷಿಕಾ ಪುಟ. ಕೆಲವು ಪುಸ್ತಕಗಳಲ್ಲಿ ಶೀರ್ಷಿಕಾ ಪುಟದ ಹಿಂದೆ ಪುಸ್ತಕದ ಹೆಸರನ್ನಷ್ಟೆ ಉಳ್ಳ ಅರ್ಧ ಶೀರ್ಷಿಕಾ ಪುಟ ಇರಬಹುದು. ಶೀರ್ಷಿಕಾ ಪುಟದಲ್ಲಿ ಪುಸ್ತಕದ ಹೆಸರು, ಲೇಖಕರ ಹೆಸರು, ಪ್ರಕಾಶಕರ ಹೆಸರು, ಮುದ್ರಕರ ಹೆಸರು, ಪ್ರಕಟವಾದ ವರ್ಷ, ಆವೃತ್ತಿಯ ಸಂಖ್ಯೆ, ಮುದ್ರಣ ಪ್ರತಿಗಳ ಸಂಖ್ಯೆ, ಬೆಲೆ ಇರುತ್ತವೆ. ಕೃತಿ ಸ್ವಾಮ್ಯ ಹಕ್ಕನ್ನೂ ಸೂಚಿಸಲಾಗಿರುತ್ತದೆ. ಈ ಪುಟವಾದ ಬಳಿಕ ಪರಿವಿಡಿ ಚಿತ್ರಗಳ ಪಟ್ಟಿ ಲೇಖಕನ ಮಾತು ಅಥವಾ ಮುನ್ನುಡಿ ಇರುತ್ತದೆ. ಅನಂತರ ಪುಸ್ತಕದ ಮುಖ್ಯ ಪಠ್ಯ. ಈ ಪಠ್ಯ ಅನೇಕ ಅಧ್ಯಾಯಗಳಾಗಿ ಉಪ ಅಧ್ಯಾಯಗಳಾಗಿ ವಿಭಜಿತವಾಗಿರಬಹುದು. ಪಠ್ಯದ ಕೊನೆಯಲ್ಲಿಯ ಘಟಕಗಳು 1. ಟಿಪ್ಪಣಿಗಳು. ಎಷ್ಟೋ ಪುಸ್ತಕಗಳಲ್ಲಿ ಟಿಪ್ಪಣಿಗಳನ್ನು ಆಯಾ ಪುಟದ ಅಡಿಯಲ್ಲಿ ಟಿಪ್ಪಣಿಗಳಾಗಿ ಹಾಕಿರಬಹುದು. 2. ಅನುಬಂಧಗಳು 3. ಪಟ್ಟಿಯ ವಿಷಯಕ್ಕೆ ಸಂಬಂಧಿತ ಇತರ ಪುಸ್ತಕಗಳ ಪಟ್ಟಿ. 4. ಸೂಚಿ. 

ಪ್ರಕಾಶಕರು ಸಾಮಾನ್ಯವಾಗಿ ನಾಲ್ಕು ಬಗೆಯ ಪುಸ್ತಕಗಳನ್ನು ಹೊರತರುತ್ತಾರೆ. 1. ವಾಣಿಜ್ಯ : ಸಾಮಾನ್ಯವಾಗಿ ಎಲ್ಲ ಪುಸ್ತಕದಂಗಡಿಗಳಲ್ಲಿಯೂ ದೊರೆಯುವ ಕಾದಂಬರಿ, ಕಥಾ ಸಂಕಲನ, ಕಾವ್ಯ, ಪ್ರಬಂಧ, ಮಕ್ಕಳ ಪುಸ್ತಕ, ಪ್ರವಾಸ ಸಾಹಿತ್ಯ, ಧಾರ್ಮಿಕ ಸಾಹಿತ್ಯ, ಪ್ರಸ್ತುತ ಘಟನೆಗಳನ್ನು ಕುರಿತ ಸಾಹಿತ್ಯ ಇತ್ಯಾದಿ. 2. ಪಠ್ಯ : ಶಾಲೆ ಕಾಲೇಜುಗಳ ವಿದ್ಯಾರ್ಥಿಗಳಿಗಾಗಿ ರಚಿತವಾದವು. 3. ಪರಾಮರ್ಶನ ಕೃತಿ, ವಿಶ್ವಕೋಶ ನಿಘಂಟು, ಅಟ್ಲಾಸ್ ಇತ್ಯಾದಿ. 4. ಮರುಮುದ್ರಣ : ಜನಪ್ರಿಯ ಕೃತಿಗಳ ಅಗ್ಗದ ಮುದ್ರಣ. (ನೋಡಿ- ಪ್ರಕಟಣೋದ್ಯಮ)
(ಎಸ್.ಎಸ್.ಎಂ.ಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ